ಆಡಳಿತ ನಿರ್ವಾಹಕ ಮಂಡಲಿ
ಕಾಯಿದೆಗಳನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಹಲವು ವ್ಯಕ್ತಿಗಳ ಮುಖಂಡತ್ವದಲ್ಲಿ ಸರ್ಕಾರದಿಂದ ನಿಯೋಜಿತವಾದುದು (ಅಡ್ಮಿನಿಸ್ಟ್ರೇಟಿವ್ ಬೋರ್ಡ್). ಇಂಗ್ಲೆಂಡ್‍ನಲ್ಲಿ ಬಳಕೆಯಲ್ಲಿದೆ. ಉದಾ: ಸ್ಥಳೀಯ ಸರ್ಕಾರಿ ಮಂಡಲ (1871-1919). ಇಂಥ ನಿಯೋಗಗಳಿಗೆ (ಏಜೆನ್ಸೀಸ್) ಅಮೆರಿಕದಲ್ಲಿ ಆಡಳಿತ ನಿರ್ವಾಹಕ ಆಯೋಗ (ಕಮೀಷನ್ಸ್) ಎನ್ನುವರು. ಕಠಿಣ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿದು ಸಂಸತ್ತಿಗೆ ಸೂಚಿಸ ಲೋಸುಗ ಪ್ರಭಾವೀ ವ್ಯಕ್ತಿಗಳನ್ನೊಳಗೊಂಡ ಎಷ್ಟೊ ನಿಯೋಗಗಳನ್ನು ಇಂಗ್ಲೆಂಡ್ ಸರ್ಕಾರ ನಿಯಮಿಸಿದ್ದಾಗ್ಯೂ ಅವಾವುವಕ್ಕೂ ಕಾರ್ಯನಿರ್ವಹಿಸುವ ಅಧಿಕಾರವಿಲ್ಲ. ಉದಾ: ಪ್ರಜಾಸೇವಾ ಆಯೋಗ ಮತ್ತು ಹಲವು ರಾಜಯೋಗಗಳು. ಮಂಡಲಿಗೂ ಆಯೋಗಕ್ಕೂ ವ್ಯತ್ಯಾಸವಿಷ್ಟೆ. ಮಂಡಲಿಯಲ್ಲಿಯ ವ್ಯಕ್ತಿಗಳೆಲ್ಲರೂ ಸಮಾನಾಧಿಕಾರವುಳ್ಳವರಾಗಿರುತ್ತಾರಲ್ಲದೆ ಸರ್ಕಾರದ ಕಾರ್ಯಾಂಗದಂತೆ ಕಾರ್ಯವನ್ನು ನಿರ್ವಹಿಸುವ ಅಧಿಕಾರ ಮಂಡಲಿಗಳಿಗುಂಟು. ಆಯೋಗದಲ್ಲಿ ಒಬ್ಬನೇ ವ್ಯಕ್ತಿ ಇರಬಹುದು. (ಉದಾ: ಮಹಾಜನ್ ಆಯೋಗ) ಒಬ್ಬ ವ್ಯಕ್ತಿಯ ಮುಖಂಡತ್ವದಲ್ಲಿ ಸಹಕರಿಸುವ ಅಧಿಕಾರವಿದೆಯೇ ವಿನಾ ಕಾರ್ಯನಿರ್ವಹಿಸುವ ಅಧಿಕಾರವಿಲ್ಲ. ಕಾರ್ಯನಿರ್ವಾಹಕ ಮಂಡಲಿ ಮತ್ತು ಸರ್ಕಾರಿ ಕಾರ್ಪೋರೇಷನ್‍ಗಳಲ್ಲೂ ಭಿನ್ನತೆಯುಂಟು. ಎರಡನೆಯದು ಸ್ವಾಯತ್ತಾಧಿಕಾರವನ್ನು ಪಡೆದ ಸರ್ಕಾರದ ಪ್ರತ್ಯಕ್ಷ ಅಂಗ. ಉದಾ: ಬ್ರಿಟನ್ನಿನ ಆಕಾಶವಾಣಿ (ಬಿ.ಬಿ.ಸಿ.). ಅಮೆರಿಕದ ಟೆನೆಸ್ಸಿ ಕಣಿವೆಯ ಅಧಿಕಾರ ಮಂಡಲಿ. ಒಬ್ಬನೇ ವ್ಯಕ್ತಿ ನಿರ್ವಹಿಸುವಷ್ಟು ಚೆನ್ನಾಗಿ ಒಂದು ಮಂಡಲಿ ಕಾರ್ಯಗಳನ್ನು ನಿರ್ವಹಿಸದಿದ್ದರೂ ಪಕ್ಷಪಂಗಡಗಳ ಸಂಕುಚಿತಭಾವನೆಯನ್ನು ತೊರೆದು ಹಾಕಿ, ವಿಶಾಲಭಾವನೆಯ ತತ್ತ್ವಗಳನ್ನು ಮುಂದುವರಿಸಬಲ್ಲುದು.									  
(ವಿ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ